ಡೇನಿಯೊ
ಗೆಂಡೆ ಮೀನುಗಳ ಗುಂಪಿಗೆ ಸೇರಿದ ಒಂದು ಬಗೆಯ ಮೀನು. ನಾಲ್ಕು ಅಥವಾ ಐದು ಅಂಗುಲಗಳ ಉದ್ದಕ್ಕೆ ಬೆಳೆಯುತ್ತದೆ. ದೇಹ ಮತ್ತು ಈಜುರೆಕ್ಕೆಗಳಿಗೆ ವಿಧವಿಧವಾದ ಬಣ್ಣಗಳು ಇರುವುದರಿಂದ, ಇದನ್ನು ಜೀಬ್ರ ಮೀನಿನಂತೆ ಅಂದದ ಮೀನಾಗಿ ಸಾಕುವುದುಂಟು. ಇಂಥ ಕೆಲವು ಮೀನುಗಳನ್ನು ಇಲ್ಲಿ ಹೆಸರಿಸಲಾಗಿದೆ. ದೈತ್ಯ ಡೇನಿಯೊ (ಡೇನಿಯೊ ಮಲಬಾರಿಕಸ್), ಚುಕ್ಕೆ ಡೇನಿಯೊ (ಬ್ರ್ಯಾಕಿಡೇನಿಯೊ ನೈಗ್ರೊಫ್ಯಾಸಿಯೇಟಸ್), ಮುತ್ತಿನ ಡೇನಿಯೊ (ಬ್ರ್ಯಾಕಿಡೇನಿಯೊ ಆಲ್ಬೊಲಿನಿಯಾಟಸ್), ಜೀಬ್ರ ಮೀನು (ಬ್ರ್ಯಾಕಿಡೇನಿಯೋ ರೇರಿಯೊ). 

	ಕರ್ನಾಟಕದಲ್ಲಿ ಅರಿಸಿನ ಪಟ್ಟೆ (ಡೇನಿಯೊ ಈಕ್ವಿಪಿನೇಟಸ್) ಎಂಬ ಹೆಸರುಳ್ಳ ಡೇನಿಯೊ ಸಿಗುತ್ತದೆ.  ಇದು ಬೆಳ್ಳಿಯ ಬಣ್ಣದ ಸುಂದರವಾದ ಮೀನು. ಮೈಮೇಲೆ ನೀಲಿ ಮತ್ತು ಕಿತ್ತಲೆ ಕೆಂಪುಬಣ್ಣದ ಪಟ್ಟೆಗಳು ಇವೆ. ಈಜು ರೆಕ್ಕೆಗಳು ಪೀತಬಣ್ಣದವು. ಬೆನ್ನಿನ ಮತ್ತು ಆಸನದ ರೆಕ್ಕೆಗಳ ಹೊರಭಾಗಗಳಲ್ಲಿ ಅಗಲವಾದ ನೀಲಿ ಬಣ್ಣದ ಪಟ್ಟೆಗಳಿವೆ. ಇದರ ಸಂತಾನವೃದ್ಧಿಯ ಕ್ರಮ ಜೀಬ್ರ ಮೀನುಗಳಂತೆ.
(ಬಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ